ಬೌದ್ಧ ಪಂಥಗಳು

ಬುದ್ಧನ ಮರಣಾನಂತರ ಆತನ ಬೋಧನ ಮತ್ತು ತತ್ತ್ವಗಳನ್ನು ಆತನ ಅನುಯಾಯಿಗಳು ಅನುಸರಿಸಲು, ಬೋಧಿಸಲು ಪ್ರಚಾರ ಮಾಡಲು ಏರ್ಪಡಿಸಿಕೊಂಡ ಸಂಘಗಳು ಅಥವಾ ಪಂಥಗಳು. ಪ್ರಾರಂಭದಲ್ಲಿ ಹೀನಯಾನ ಮತ್ತು ಮಹಾಯಾನ ಎಂಬ ಎರಡು ಪಂಥಗಳಾದರೂ ಇವು ಕಾಲದಿಂದ ಕಾಲಕ್ಕೆ ಟಿಸಿಲೊಡೆದು ಅನೇಕ ಪಂಥಗಳೇರ್ಪಟ್ಟವು. ಬುದ್ಧ ತೀರಿಕೊಂಡ ವರ್ಷದಲ್ಲೆ ವಿನಯ ಪಿಟಕದ ವಿಚಾರವಾಗಿ ಭಿನ್ನಾಭಿಪ್ರಾಯಗಳು ತಲೆದೋರಿದುವು. ಇದೇ ಮೊದಲನೆಯ ಬೌದ್ಧ ಸಂಗೀತಿಗೆ ಕಾರಣವಾಯಿತು. ಮತ್ತೆ ನೂರು ವರ್ಷಗಳಲ್ಲಿ ಸಂಘ ಇಬ್ಭಾಗವಾಗಿ ಒಡೆಯಿತು. ಎರಡನೆಯ ಸಂಗೀತಿ ವೈಶಾಲಿಯಲ್ಲಿ ಸಮಾವೇಶಗೊಂಡಾಗ ಏಳುನೂರು ಮಂದಿ ಭಿಕ್ಷುಗಳಿದ್ದರು. ಉಳಿದವರು ಕೌಶಾಂಬಿಯಲ್ಲಿ ಸೇರಿ ಬೇರೆ ಸಂಗೀತಿ ನಡೆಸಿದರು. ವೈಶಾಲಿಯವರು ಸ್ಥವಿರ ವಾದಿಗಳೆನಿಸಿಕೊಂಡರು; ಕೌಶಾಂಬಿಯವರು ಮಹಾಸಾಂಘಿಕರಾದರು. ಕಾಲಕ್ರಮದಲ್ಲಿ ಸ್ಥವಿರವಾದಿಗಳು ಹೈಮವತರೆಂದೂ ಸರ್ವಾಸ್ತಿವಾದಿಗಳೆಂದೂ ಮತ್ತೆ ಇಬ್ಭಾಗವಾದರು. ಈ ಎರಡೂ ಗುಂಪುಗಳಿಂದ ಕವಲೊಡೆದು ವಾತ್ಸೀಪುತ್ರೀಯರು, ಧರ್ಮೋತ್ತರೀಯರು ಭದ್ರಯಾನಿಕರು ಸಮ್ಮಿತೀಯರು, ಧರ್ಮ ಗುಪ್ತಕರು, ಸೌತ್ರಾಂತಿಕರು ಇತ್ಯಾದಿ ಶಾಖೆಗಳಾದವು. ಮಹಾಸಾಂಫಿಕರು ಅಶೋಕನ ವೇಳೆಗೆ ಒಂಬತ್ತು ಶಾಖೆಗಳಲ್ಲಿದ್ದರು. ಮೂಲಮಹಾಸಾಂಫಿಕರು, ಏಕವ್ಯವಹಾರಿಕರು, ಲೇಕೋತ್ತರವಾದಿಗಳು, ಕೌರುಕುಲ್ಲುಕರು, ಬಹುಶ್ರುತೀಯರು ಪ್ರಜ್ಞಪ್ತಿವಾದಿಗಳು, ಚ್ಯೆತ್ಯಕರು, ಅವರಶೈಲರು, ಉತ್ತರಶೈಲರು. ಅಂತೂ ಅಶೋಕಚಕ್ರವರ್ತಿಯ ಕಾಲದಲ್ಲಿ ಮೂರನೆಯ ಸಂಗೀತಿ ನಡೆದಾಗ ಹದಿನೆಂಟು ಪಂಥಗಳು ಇದ್ದುವು. ತಿಸ್ಸ-ಮೊಗ್ಗಲಿಪುತ್ತ ಸಿದ್ಧಪಡಿಸಿದ ಕಥಾವಸ್ತು ಈ ಪಂಥಗಳನ್ನು ಹೆಸರಿಸಿದೆ.

	ಸ್ಥವಿರವಾದಿಗಳು ಪಾಳೀಪಾಠದ ತ್ರಿಪಿಟಕವಾಙ್ಮಯವನ್ನೇ ಅವಲಂಬಿಸಿ ಪ್ರಾಚೀನ ಪಂಥವಾಗಿ ಉಳಿದರು. ಇವರೇ ಮುಂದೆ ಹೀನಯಾನವೆನಿಸಿದರು. ಮಹಾಸಾಂಘಿಕರು ಹೊಸ ಕಲ್ಪನೆಗಳನ್ನು ಅಳವಡಿಸಿಕೊಂಡು ಮಹಾಯಾನಕ್ಕೆ ಎಡೆ ಮಾಡಿಕೊಟ್ಟರು. ಮಹಾಯಾನದವರಲ್ಲಿ ಮಾಧ್ಯಮಿಕರು, ಯೋಗಾಚಾರರು ಎಂಬುದಾಗಿ ಎರಡು ಗುಂಪಾದರು.

	ಸ್ಥವಿರವಾದ ಒಂದು ಉಪಪಂಥವಾದದ ಸರ್ವಾಸ್ತಿವಾದ ಕ್ರಿ.ಶ. ಮೊದಲ ಶತಮಾನದ ವೇಳೆಗೆ ಉತ್ತರಭಾರತದಲ್ಲೆಲ್ಲ ವ್ಯಾಪಿಸಿದ್ದಿತು. ಇವರಿಗೆ ಅಭಿಧರ್ಮ ಜ್ಞಾನ ಪ್ರಸ್ಥಾನಶಾಸ್ತ್ರ ಪ್ರಮುಖಗ್ರಂಥ. ಇದನ್ನು ರಚಿಸಿದ ಕಾತ್ಯಾಯನೀಪುತ್ರ ಬುದ್ಧನ ನಿರ್ವಾಣಾನಂತರ ಮುನ್ನೂರು ವರ್ಷಗಳ ಅನಂತರದಲ್ಲಿದ್ದವ. ಇದರ ಸಂಸ್ಕøತ ಮೂಲ ಇಂದು ಉಪಲಬ್ದವಿಲ್ಲ; ಕ್ರಿ.ಶ. 382ರಲ್ಲಿ ಮಾಡಿದ ಚೀನೀ ಭಾಷಾಂತರ ಉಳಿದಿದೆ. ವಸುಬಂಧುವಿನ ಅಭಿಧರ್ಮಕೋಶದಲ್ಲಿ (4ನೆಯ ಶತಮಾನ) ಸರ್ವಾಸ್ತಿವಾದದ ಮುಖ್ಯ ಪ್ರಮೇಯಗಳ ಸಂಪೂರ್ಣ ನಿರೂಪಣೆಯಿದೆ. ಇರುವುದನ್ನೆಲ್ಲ ಐದು ಸ್ಕಂದಗಳು, ಹನ್ನೆರಡು ಆಯತನಗಳು, ಹದಿನೆಂಟು ಧಾತುಗಳಾಗಿ ವಿಶ್ಲೇಷಣೆಮಾಡಿ ಸಂಸ್ಕøತಧರ್ಮ ಅಸಂಸ್ಕøತಧರ್ಮಗಳೆಂದು ಎರಡು ಭಾಗ ಮಾಡಿದರು. ಎಲ್ಲವೂ ಎಲ್ಲ ಕಾಲಗಳಲ್ಲೂ ಇರುವುದೆಂದು ವಾದಿಸಿದ ಇವರು ಪರಮಾಣುವಾದ ಹೂಡಿದರು. ಕರ್ಮವನ್ನು ಚೇತನ ಕರ್ಮ (ಮನಸ್ಕಾರ), ಚೈತಸಿಕ ಕರ್ಮವೆಂದು ಎರಡಾಗಿ ವಿಭಜಿಸಿ ಚೈತಸಿಕವನ್ನು ಕಾಯಿಕ ವಾಚಿಕವೆಂದೂ ಕಾಯಿಕವನ್ನು ಕಾಯಿಕಜಿಜ್ಞಪ್ತಿ ಕಾಯಿಕಾವಿಜ್ಞಪ್ತಿಯೆಂದೂ ವಾಚಿಕವನ್ನು ವಾಚಿಕವಿಜ್ಞಪ್ತಿ, ವಾಚಿಕಾವಿಜ್ಞಪ್ತಿಯೆಂದೂ ವಿಭಾಗಮಾಡಿದರು. ವಿಜ್ಞಾನವನ್ನು ಪಂಚೇಂದ್ರಿಯ ಮತ್ತು ಮನಸ್ಸು ಇವುಗಳ ಮೇಲೆ ಆರು ವಿಧಗಳೆಂದು ಹೇಳಿ ಮನೋವಿಜ್ಞಾನವನ್ನು ಸ್ವಭಾವನಿರ್ದೇಶ, ಪ್ರಯೋಗನಿರ್ದೇಶ ಮತ್ತು ಅನುಸ್ಮøತಿ ನಿರ್ದೇಶವೆಂದು ವಿಶ್ಲೇಷಣೆ ಮಾಡಿದರು. ಪುದ್ಗಲವನ್ನು ಇವರು ಒಪ್ಪಲಿಲ್ಲ. ಆದರೆ ನಾಮರೂಪಗಳನ್ನೂ ಭೂತ ಭವಿಷ್ಯದ್ವರ್ತಮಾನಗಳನ್ನು ಒಪ್ಪಿದರು. ಅರ್ಹತನಾದರೆ ಪರಿನಿರ್ವಾಣವಾದಂತೆಯೇ; ನಿರ್ವಾಣ ಅರ್ಥವತ್ತಾದುದು. ಸರ್ವಾಸ್ತಿವಾದದಂತೆಯೇ ಸ್ಥವಿರವಾದಿಗಳಾದ ಹೈಮವತರು ಪಂಚಸ್ಕಂಧಗಳಿಂದ ಭಿನ್ನವಾದ ಪುದ್ಗಲವಿದೆಯೆಂದೂ ನಿರ್ವಾಣದಲ್ಲಿ ಪಂಚಸ್ಕಂಧಗಳು ಹೋದರೂ ಪುದ್ಗಲ ಉಳಿಯುವುದೆಂದೂ ವಾದಿಸಿದರು. ಸರ್ವಾಸ್ತಿವಾದಿಗಳು ಸ್ಥೂಲವಾಗಿ ಸೂತ್ರ ಪಿಟಕಕ್ಕಿಂತ ಅಭಿಧರ್ಮಪಿಟಕಕ್ಕೆ ಹೆಚ್ಚಿನ ಮಹತ್ತ್ವಕೊಟ್ಟರು. ಅಭಿಧರ್ಮಕ್ಕೆ ವಿಭಾಷಾ ಎಂಬ ವ್ಯಾಖ್ಯಾನಗಳ ಮೇಲೆ ರೂಪಗೊಂಡ ವೈಭಾಷಿಕರೂ ತಾತ್ತ್ವಿಕ ನಿಲವಿನಲ್ಲಿ ಸರ್ವಾಸ್ತಿವಾದಿಗಳೇ. ಈ ಸರ್ವಾಸ್ತಿವಾದಿಗಳಲ್ಲಿ ಒಂದು ಮತಪ್ರಭೇದವಾದ ಸೌತ್ರಾಂತಿಕ ಪಂಥ ಮುಂದೆ ಪ್ರಖ್ಯಾತಿಗೆ ಬಂದಿತು. ಸೌತ್ರಾಂತಿಕರಲ್ಲದವರು ಮೂಲಸರ್ವಾಸ್ತಿವಾದಿಗಳೆನಿಸಿಕೊಂಡರು. ಮೂಲಸರ್ವಾಸ್ತಿವಾದದ ಪ್ರಮಾಣ ಗ್ರಂಥಗಳನ್ನು ಚೀನೀಯಾತ್ರಿ ಇ-ತ್ಸಿಂಗ್ ಕ್ರಿ.ಶ.700ರ ಸುಮಾರಿಗೆ ಚೀನೀ ಭಾಷೆಗೆ ತರ್ಜುಮೆ ಮಾಡಿದ.

	ಮಹಾಯಾನದ ಪೂರ್ವಜನ್ಮವಾದ ಮಹಾಸಾಂಘಿಕ ಮತ ತಥಾಗತರು ಲೋಕದ ಜನರ ಪ್ರಕೃತಿಯನ್ನು ಪಕ್ವಗೊಳಿಸಿ ನಿರ್ವಾಣ ಸಾಧಿಸಿಕೊಳ್ಳಲು ಜನರ ನಡುವೆ ಅವತರಿಸುತ್ತಾರೆಂದು ಹೇಳಿತು. ಭೂತಭವಿಷ್ಯತ್ತುಗಳು ಇಲ್ಲವೆಂದು ಅವರ ವಾದ. ದುಃಖವೆಂಬುದು ಸ್ಕಂಧದಲ್ಲಿ ಸೇರಿಲ್ಲವೆಂದೂ ಆಯತನಗಳ ಕಲ್ಪನೆ ಸಂಪೂರ್ಣವಾಗಿ ಸಾಧುವಲ್ಲವೆಂದೂ ಅವರ ನಿಲವು. ಮಹಾಸಾಂಘಿಕರಿಂದ ಎದ್ದ ಮಾಧ್ಯಮಿಕರ ದರ್ಶನ ಜಗತ್ಪ್ರಸಿದ್ಧವಾಯಿತು. ಇದಕ್ಕೆ ಕಾರಣಪುರುಷ ಆ ದರ್ಶನದ ಪ್ರವರ್ತಕನಾದ ನಾಗಾರ್ಜುನ. ನಾಗಾರ್ಜುನ ವಿದರ್ಭದ ಬ್ರಾಹ್ಮಣ, ಬೌದ್ಧ ಧರ್ಮದ ದೀಕ್ಷೆ ತಳೆದು ಶ್ರೀಪರ್ವತದಲ್ಲಿ (ಈಗಿನ ನಾಗಾರ್ಜುನಕೊಂಡ) ವಾಸಿಸುತ್ತಿದ್ದ. ಕಾಲ ಕ್ರಿ. ಶ. ಎರಡನೆಯ ಶತಮಾನದ ಪರಾರ್ಧ. ಈತನ ಮಾಧ್ಯಮಿಕಕಾರಿಕೆಯೂ (27 ಅಧ್ಯಾಯಗಳಲ್ಲಿ 400 ಕಾರಿಕೆಗಳು) ಇವನದೇ ಆದ ಅಕುತೋಭಯವೆಂಬ ವಾಖ್ಯೆಯೂ ಬೌದ್ಧಿಕ ಪ್ರಪಂಚದಲ್ಲಿ ಕ್ರಾಂತಿ ಉಂಟು ಮಾಡಿತು. ಈ ಗ್ರಂಥದಲ್ಲಿ ಶೂನ್ಯ ಸಿದ್ಧಾಂತ (ಶೂನ್ಯತಾ ಸರ್ವದೃಷ್ಟೀನಾಂ ಪ್ರೋಕ್ತಾ ನೀಸರಣಂ ಜಿನೈಃ), ಸಂಸಾರ-ನಿರ್ವಾಣಗಳ ಅದ್ವೈತ, ಸಂವೃತಿ-ಪರಮಾರ್ಥಸತ್ಯಗಳ ನಿರೂಪಣೆ. ಬುದ್ಧಕಾಯದ ಕಲ್ಪನೆ-ಇವು ಮಾಧ್ಯಮಿಕ ಮತದ ಪ್ರಮುಖ ಪ್ರಮೇಯಗಳು.

ಮಹಾಯಾನದ ಮಡಿಲಿಂದ ಎದ್ದ ಇನ್ನೊಂದು ಸ್ವತಂತ್ರ ಪಂಥವೆಂದರೆ ಯೋಗಾಚಾರ. ಇದರ ಸರಿಯಾದ ಹೆಸರು ಯೋಗಚರ್ಯಾ. ಇದರ ಪ್ರವರ್ತಕನಾದ ಅಸಂಗ ಮೈತ್ರೇಯನಾಥನಿಂದ ಈ ದೇಶನವನ್ನು ಪಡೆದನಂತೆ. ಈ ಪಂಥದ ಮುಖ್ಯರಸ ವಿಜ್ಞಾನವಾದ. ಮಾಧ್ಯಮಿಕರಂತೆಯೇ ಯೋಗಾಚಾರರೂ ಹೊರಗಿನ ಪ್ರಪಂಚ ಪರಮಾರ್ಥದಲ್ಲಿ ಇದೆಯೆಂದು ಒಪ್ಪದೆ ವಿಜ್ಞಾನವೇ ಸತ್ಯವೆಂದು ವಾದಿಸುತ್ತಾರೆ. ಇಲ್ಲಿ ಆಲಯ ವಿಜ್ಞಾನದ ಕಲ್ಪನೆಯಿದೆ. ಯೋಗದ ಚರ್ಯೆಯಿಂದ ಬೋಧಿಸತ್ತ್ವ ದಶಭೂಮಿಗಳನ್ನು ದಾಟಿ ಸಂಬೋಧಿ ಪಡೆಯುತ್ತಾನೆಂಬುದು ಈ ಪಂಥದ ನಿಲವು (ನೋಡಿ- ಯೋಗಾಚಾರ) ಯೋಗಾಚಾರ ಭೂಮಿಶಾಸ್ತ್ರ ಎಂಬ ಗ್ರಂಥ ಈ ಪಂಥದ ಪ್ರಮಾಣಗ್ರಂಥ. ಅಸಂಗ ಪುರುಷಪುರದಲ್ಲಿದ್ದವ (ಪೆಶಾವರ್). ಈತನ ಕಾಲ ನಾಲ್ಕನೆಯ ಶತಮಾನ.

	 ಸರ್ವಾಸ್ತಿವಾದ ಮತ್ತು ಮಾಧ್ಯಮಿಕ-ಯೋಗಾಚಾರಪಂಥಗಳ ಮಧ್ಯೆ ಎರಡಕ್ಕೂ ಸೇತುವೆಯಂತೆ ಹರಿವರ್ಮನ ಸರ್ವಶೂನ್ಯತಾವಾದವಿದೆ. ಕುಮಾರ ಲಬ್ಧನೆಂಬ ಸರ್ವಾಸ್ತಿವಾದಿ ಆಚಾರ್ಯನ ಶಿಷ್ಯನಾದ ಹರಿವರ್ಮ ಸತ್ಯಸಿದ್ಧಿಶಾಸ್ತ್ರವೆಂಬ ಗ್ರಂಥ ಬರೆದು ಸರ್ವಾಸ್ತಿವಾದಕ್ಕೆ ಪ್ರತಿಯಾಗಿ ಸರ್ವಶೂನ್ಯತಾವಾದ ಮಂಡಿಸಿದ. ಇವನ ಕಾಲ ಕ್ರಿ.ಶ.ಸು. 250. ಇದು ಮುಂದಿನ ಮಹಾಯಾನಕ್ಕೆ ತುಂಬ ಸಹಕಾರಿಯಾಯಿತು.

	ಸರ್ವಾಸ್ತಿವಾದ-ವಿಜ್ಞಾನವಾದಗಳ ಪರಸ್ಪರ ವಿರುದ್ಧ ನಿಲುವುಗಳನ್ನು ಸಮನ್ವಯಮಾಡಲು ಆಲಯ ವಿಜ್ಞಾನದ ಕಲ್ಪನೆ ಕಾಣಿಸಿಕೊಂಡಿತು. ಅಸಂಗ, ವಸು ಬಂಧು, ದಿಙನಾಗ, ಧರ್ಮಪಾಲ, ಶೀಲಭದ್ರ ಇವರಿಂದ ಪುಷ್ಟವಾದ ಈ ಕಲ್ಪನೆ ಚೀನ, ಜಪಾನ್ ದೇಶಗಳ ಬೌದ್ಧಮತಗಳಿಗೆ ತುಂಬ ನೆರವಾಯಿತು. ಈ ಆಲಯ ವಿಜ್ಞಾನವನ್ನು ವಿವರಿಸುವ ಆಕರ ಗ್ರಂಥವೆಂದರೆ ಲಂಕಾವತಾರಸೂತ್ರ. ಇದರ ಪರಿಶೀಲನೆಯಿಂದ ಸರ್ವಾಸ್ತಿವಾದದ ಮುಖ್ಯ ಪ್ರಮೇಯವನ್ನೇ ಹಿಡಿದು ಹೊರಟ ಕಲ್ಪನೆ ಆಲಯವಿಜ್ಞಾನವೆಂಬುದು ಸ್ಪಷ್ಟವಾಗುತ್ತದೆ. ಇದು ವಿಜ್ಞಾನವಾದಿಗಳ ತರ್ಕದಿಂದ ಸಿದ್ಧವಾದುದಾದರೆ ಯೋಗಾಚಾರರು ತಮ್ಮ ಯೋಗಾಭ್ಯಾಸದ ಅನುಭವದಲ್ಲಿ ಇದನ್ನು ಸಾಕ್ಷಾತ್ಕರಿಸಿಕೊಂಡಿದ್ದರು.

	ಸಂವೃತಿಸತ್ಯ-ಪರಮಾರ್ಥ ಸತ್ಯಗಳಿಗೆ ಭೇದಮಾತ್ರ ಹೇಳಿದ ಮಾಧ್ಯಮಿಕರೂ ಯೋಗಾಚಾರರೂ ಸಿದ್ಧಾಂತವನ್ನು ಮುಟ್ಟಲಿಲ್ಲವೆಂದೂ ಭೂತ ತತ್ವವೆಂಬ ಕಲ್ಪನೆಯಿಂದ ಈ ದ್ವೈತಪಕ್ಷವನ್ನು ನಿರಸನಮಾಡಿದ ಅಶ್ವಘೋಷನದೇ ಸಿದ್ಧಾಂತವೆಂದು ಚೀನೀ ಬೌದ್ಧರ ನಂಬಿಕೆ. ಅಶ್ವಘೋಷ ಕಾಲದಲ್ಲಿದ್ದವ. ಕನಿಷ್ಕನಿಗೆ ಗುರುವಾಗಿದ್ದನೆಂದೂ ಹೇಳುತ್ತಾರೆ. ಇವನು ರಚಿಸಿದ ಮಹಾಯಾನ ಶ್ರದ್ಧೋತ್ಪಾದಶಾಸ್ತ್ರ ಹಲವಾರು ಮತಗಳನ್ನು ಮೂಡಿಸಿತು_ತೀಎನ್‍ತೈ, ಅವತಂಸಕ, ಧ್ಯಾನ (ಛಾ ಅನ್), ಸುಖಾವತೀವ್ಯೂಹ_ಇವು ಪ್ರಮುಖವಾದುವು. ತೀಎನ್‍ತೈ ಎಂಬುದು ಮುಖ್ಯವಾಗಿ ಚೀನೀ ಮತ. ಆದರೆ ಅದಕ್ಕೆ ಮೂಲ ಸದ್ಧರ್ಮಪುಂಡರೀಕ. ನಾಗಾರ್ಜುನನ ಮಾಧ್ಯಮಿಕ ಪಂಥದ ಪ್ರಭಾವವೂ ಇಲ್ಲಿ ಕಾಣುತ್ತದೆ. ಈ ಪಂಥದ ಮೂರು ಮುಖ್ಯ ಪ್ರಮೇಯಗಳು_ಶೂನ್ಯತಾ, ಪ್ರಜ್ಞಪ್ತಿ, ಮಧ್ಯಮ ಮಾರ್ಗ. ಇದೇ ಜಪಾನಿನಲ್ಲಿ ಟೆಂಡಾಯ್ ಎಂಬ ಹೆಸರಿನಿಂದ ಪ್ರಮುಖವಾದ ಬೌದ್ಧವಂತವಾಗಿ ಬೆಳೆಯಿತು.

	ಈ ತೀಎನ್‍ತೈ ಎಂಬ ಚೇನೀ ಮತ ಮುಖ್ಯವಾಗಿ ಮಾಧ್ಯಮಿಕ ಪಂಥಕ್ಕೆ ಸೇರಿದ ಶಾಖೆಯಾದರೆ ಅವತಂಸಕಪಂಥ ಯೋಗಾಚಾರದ ಉಪಪಂಥ. ಕ್ರಿ.ಶ.560ರ ಸುಮಾರಿಗೆ ಇದ್ದ ತು-ಫಾ-ಷುನ್ ಎಂಬ ಮಹಾಭಿಕ್ಷು ಅಶ್ವಘೋಷ್ನ ನಾಗಾರ್ಜುನ ಇವರ ಪರಂಪರೆಗೆ ಸೇರಿದವನೆಂದು ಪ್ರಖ್ಯಾತನಾಗಿ ಬುದ್ಧಾವತಂಸಕ ಮಹಾವೈಪುಲ್ಯ ಗೂತ್ರವನ್ನು ಅಧಾರವಾಗಿಟ್ಟುಕೊಂಡು ಈ ಶಾಖೆಯನ್ನು ಪ್ರವರ್ತಿಸಿದ. ಈ ಪಂಥದ ಮುಖ್ಯ ಪ್ರಮೇಯವೆಂದರೆ ಏಕಚಿತ್ತಾಂತರ್ಗತ ಧರ್ಮ ಲೋಕ. ಮಾಧ್ಯಮಿಕರೂ ಯೋಗಾಚಾರರೂ ಬೋಧಿಸತ್ತ್ವ ಯಾನವನ್ನು ಮಾತ್ರ ಹೇಳುತ್ತಾರೆಂದೂ ಯೋಗಾಚಾರರೂ ಬೋಧಿಸತ್ತ್ವ ಯಾನವನ್ನು ಮಾತ್ರ ಜಪಾನ್ ದೇಶದಲ್ಲಿ ವಿಶೇಷವಾಗಿ ಪ್ರಚಲಿತವಾಯಿತು.

	ಕ್ರಿ.ಶ. ಐದನೆಯ ಶತಮಾನದಲ್ಲಿ ಮಹಾಯಾನದ ಅಂಗವಾಗಿ ವಜ್ರಯಾನವೆಂಬ ಮತ ವ್ಯವಸ್ಥಿತವಾಯಿತು. ತಂತ್ರಕ್ರಿಯೆಗಳಲ್ಲಿ ಆಸಕ್ತಿ, ತಂತ್ರಶಾಸ್ತ್ರಗಳ ಪ್ರಭಾವದಿಂದ ಮೂಡಿಬಂದ ಈ ಮತದಲ್ಲಿ ತಂತ್ರಕ್ರಿಯೆಗಳು, ಡಾಕಿನೀ ಇತ್ಯಾದಿ ಶಕ್ತಿಗಳು, ಬುದ್ಧ ಬೋಧಿಸತ್ತ್ವರಿಗೆ ಶಕ್ತಿಮೂರ್ತಿಗಳು; ತಾರಾಭಗವತಿಯ ಕಲ್ಪನೆ, ಧಾರಣಿಗಳು, ಮಂಡಲಗಳು, ಯಂತ್ರಗಳು ಮುಂತಾದವು ಇಲ್ಲಿಯ ಪರಿಕರಗಳು. ಮಾಧ್ಯಮಿಕರ ಶೂನ್ಯತೆಗೆ ಈ ಶಾಖೆ ವಜ್ರಸತ್ತ್ವದ ರೂಪ ಕೊಟ್ಟಿತು. ಈ ದೃಷ್ಟಿಯಿಂದ ಬೌದ್ಧಮತದಲ್ಲಿ ತಂಥ್ರದೀಕ್ಷೆ ಬೆಳೆದು ಟಿಬೆಟ್‍ನಲ್ಲೂ, ಚೀನದಲ್ಲೂ, ಜಪಾನಿನಲ್ಲೂ ಹಲವಾರು ಪಂಥಗಳು ಹುಟ್ಟಿದುವು.

	ಸುಖಾವತಿಯೆಂಬ ಸ್ವರ್ಗದಲ್ಲಿ ಪಟ್ಟಭದ್ರನಾದ ಅಮಿತಾಭನ (ಜಪಾನೀಭಾಷೆಯಲ್ಲಿ ಅಮಿದ) ಅನುಗ್ರಹದಿಂದ ಮುಕ್ತಿ ಪಡೆಯುವ ಕಲ್ಪನೆಯಿಂದ ಅಮಿದಮತ ಜಪಾನಿನಲ್ಲಿ ಜನಪ್ರಿಯವಾಯಿತು. ಕ್ರಿ.ಶ. ನಾಲ್ಕನೆಯ ಶತಮಾನದಲ್ಲೇ ಇದರ ಉಗಮವಾಯಿತೆಂದೂ ಏಳನೆಯ ಶತಮಾನದ ಸುಮಾರಿಗೆ ರೂಢವಾಯಿತೆಂದೂ ಹೇಳುತ್ತಾರೆ. ಆದರೆ ಜಪಾನಿನಲ್ಲಿ 1133-1212ರ ನಡುವೆ ಇದ್ದ ಹೋನೆನ್ ಎಂಬ ಸಂತನಿಂದ ಇದು ಪ್ರವೃತ್ತವಾಯಿತೆಂದು ತಿಳಿದುಬರುತ್ತದೆ. ಇದರಲ್ಲಿ ನಾಮಸ್ಮರಣೆ, ಪೂಜೆ, ಪ್ರಣಿಧಿ, ಹರಕೆಗಳೇ ಪ್ರಧಾನ ಅಂಗಗಳು ಜಪಾನಿನ ಬೌದ್ಧಧರ್ಮದಲ್ಲಿ ಅತ್ಯಂತ ಪ್ರಭಾವಶಾಲಿಯಾದ ಮತವೆಂದರೆ ಧ್ಯಾನಪಂಥ ಸೆನ್. 1227ರಲ್ಲಿ ಡೋಗೆನ್ ಎಂಬಾತ ಚೀನದಿಂದ ಜಪಾನಿಗೆ ಹಿಂದಿರುಗಿದಾಗ ಅಲ್ಲಿ ಬೋಧಿಧರ್ಮನಿಂದ ಪ್ರವರ್ತಿತವಾಗಿದ್ದ ಈ ಪಂಥವನ್ನು ಜಪಾನಿಗೆ ತಂದು ಅದನ್ನು ಬಿತ್ತಿದ ಅದರ ಬೆಳೆ ಕಾಲಕ್ರಮದಲ್ಲಿ ಯಥೇಚ್ಛವಾಗಿ ಬೆಳೆಯಿತು.    (ನೋಡಿ- ಧ್ಯಾನ)	 
											(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ